ಬೆಂಗಳೂರು, ಅಕ್ಟೋಬರ್ 19: ಕರ್ನಾಟಕದಲ್ಲಿ ಮುಂದಿನ 48 ಗಂಟೆಗಳ ಕಾಲ ಅತ್ಯಧಿಕ ಮಳೆಯಾಗುವ ಲಕ್ಷಣಗಳು. ಈ ಮೂಲಕ ಹಿಂಗಾರು ಮಳೆ ಚುರುಕಾಗುವ ಮುನ್ಸೂಚನೆ ದೊರೆತಿದೆ. ದಕ್ಷಿಣ ಒಳನಾಡಿಗೆ ಗುಡುಗು ಮಿಂಚು ಸಹಿತ ಭಾರಿ ಮಳೆ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮಲೆನಾಡಿನ ಜಿಲ್ಲೆಗಳು ಒಳಗೊಂಡ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ನಾಳೆ ಮಂಗಳವಾರ ಮತ್ತು ಬುಧವಾರ ವ್ಯಾಪಕ ಮಳೆ ಆಗಲಿದೆ. ಈ ಪೈಕಿ ಮಂಗಳವಾರ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಗುಡುಗು ಸಹಿತ ಧಾರಾಕಾರವಾಗಿ ಬಿಟ್ಟು ಬಿಡದೇ ಮಳೆ ಸುರಿಯುವ ಸಾಧ್ಯತೆಗಳು ಇವೆ. ಹೀಗಾಗಿ ಈ ಜಿಲ್ಲೆಗಳಿಗೆ ಒಂದು ದಿನ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ.
ಉಳಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿತ್ರದುರ್ಗ, ತುಮಕೂರು, ದಾವಣಗೆರೆ, ಮಂಡ್ಯ, ಮೈಸೂರು, ಚಾಮರಾಜನಗರ, ಶಿವಮೊಗ್ಗ, ವಿಜಯನಗರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಬೀಳಲಿದೆ.
2 ದಿನ ಬಳಿಕ ಕರಾವಳಿಗೆ ಮಳೆ ಮುಂದುವರಿಕೆ
ಇದೇ ವೇಳೆ ಎರಡು ದಿನಗಳ ಅವಧಿಯಲ್ಲಿ ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ದಿನವಿಡೀ ಜಿಟಿ ಮಳೆ ಹಲವೆಡೆ ವ್ಯಾಪಕ ಮಳೆ ಸುರಿಯುವ ಲಕ್ಷಣಗಳು ಕಂಡು ಬಂದಿವೆ.
ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಆಗಾಗ ತುಂತುರು ಮಳೆ ಆಗಬಹುದು. ಇದರ ಹೊರತಾಗಿ ಈ ಭಾಗದಲ್ಲಿ ಮತ್ತು ರಾಜ್ಯದ ಬೇರಾವ ಭಾಗದ ಪ್ರದೇಶಗಳಿಗೆ ಗಂಭೀರ ಸ್ವರೂಪದ ಮಳೆ ಮುನ್ಸೂಚನೆಗಳು ಇಲ್ಲ ಎಂದು ಹೇಳಲಾಗಿದೆ.
ಮುಂದಿನ ಎರಡು ದಿನ ಬಳಿಕ ಉತ್ತರ ಮತ್ತು ದಕ್ಷಿಣ ಒಳನಾಡಿನ ಭಾಗದಲ್ಲಿ ಮಳೆ ಮತ್ತೆ ಕ್ಷೀಣಿಸಲಿದೆ. ಇದೇ ವೇಳೆ ಕರಾವಳಿ ಭಾಗದ ಜಿಲ್ಲೆಗಳಿಗೆ ಹಗುರದಿಂದ ಸಾಧಾರಣ ಮಳೆ ಐದು ದಿನವು ಮುಂದುವರಿಯಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.
ಗರಿಷ್ಠ-ಕನಿಷ್ಠ ತಾಪಮಾನ ಮಾಹಿತಿ
ಕಳೆದ 24 ಗಂಟೆಗಳಲ್ಲಿ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಭಾಗದಲ್ಲಿ ಮಾತ್ರವೇ ಮೂರು ಸೆಂಟಿ ಮೀಟರ್ ಮಳೆ ಬಿದ್ದಿದೆ. ಉಳಿದಂತೆ ಎಲ್ಲಡೆ ಶುಷ್ಕ ವಾತಾವರಣವೇ ಮುಂದುವರಿದೆ. ರಾಜ್ಯದ ಗರಿಷ್ಠ ತಾಪಮಾನ ಕಲಬುರಗಿಯಲ್ಲಿ 35, ಗದಗ, ಕಾರವಾರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ತಲಾ 34 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ ಚಿಕ್ಕಮಗಳೂರಿನಲ್ಲಿ 16.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ವರದಿ ತಿಳಿಸಿದೆ.
ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಸೃಷ್ಟಿ- ಕರ್ನಾಟಕ ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ..!
ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಸೃಷ್ಟಿಯಾದ್ದರಿಂದ ಕೇರಳ, ತಮಿಳುನಾಡು ಹಾಗೂ ಕರ್ನಾಟಕದ ಕೆಲ ಭಾಗಗಳಲ್ಲಿ ಭಾರೀ ಮಳೆಯ ಮುನ್ಸೂಚನೆಯನ್ನು ಕೇಂದ್ರ ಹವಾಮಾನ ಇಲಾಖೆ ನೀಡಿದೆ.
ನವದೆಹಲಿ: ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಸೃಷ್ಟಿಯಾದ್ದರಿಂದ ಕೇರಳ, ತಮಿಳುನಾಡು ಹಾಗೂ ಕರ್ನಾಟಕದ ಕೆಲ ಭಾಗಗಳಲ್ಲಿ ಭಾರೀ ಮಳೆಯ ಮುನ್ಸೂಚನೆಯನ್ನು ಕೇಂದ್ರ ಹವಾಮಾನ ಇಲಾಖೆ ನೀಡಿದೆ.
ಜೊತೆಗೆ ಕೇರಳ ಮತ್ತು ಮಾಹೆಯ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಅದು ಎಚ್ಚರಿಕೆ ನೀಡಿದೆ.
ದಕ್ಷಿಣ ಒಳನಾಡಿನ ಕರ್ನಾಟಕ, ತಮಿಳುನಾಡು, ಪುದುಚೇರಿ, ಕಾರೈಕಲ್ ಮತ್ತು ಲಕ್ಷದ್ವೀಪಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಳೆದೆರಡು ದಿನಗಳಿಂದ ಸುರಿದ ಭಾರೀ ಮಳೆಯಿಂದ ತತ್ತರಿಸಿರುವ ಕೇರಳದಲ್ಲಿ ಸೋಮವಾರ ಬೆಳಗ್ಗೆ ವರುಣ ತುಸು ಬಿಡುವು ನೀಡಿದ್ದಾನೆ.
ಜಲಾವೃತ ಪ್ರದೇಶಗಳಿಂದ ನೀರು ಇಳಿಮುಖವಾಗಿದ್ದರೂ, ಮಧ್ಯಾಹ್ನದ ವೇಳೆ ಮಳೆ ಹೆಚ್ಚಾಗಿದೆ.
ಕರ್ನಾಟಕದ ಉಡುಪಿ, ಉತ್ತರ ಕನ್ನಡ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಚಾಮರಾಜನಗರ, ಬೆಳಗಾವಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.