ಕರುನಾಡ ರೈತರಿಗೆ ನಮಸ್ಕಾರಗಳು
ರಾಜ್ಯದ ರೈತರ ಖಾತೆಗೆ ಮುಂದಿನ ಒಂದು ವಾರದ ಒಳಗೆ ಬರಪರಿಹಾರದ ಮೊದಲ ಕಂತಿನ ಹಣ ಜಮೆಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
12 ಲಕ್ಷ ಜನರಿಗೆ ಹಣ ಪಾವತಿಸಲು ರಿಸರ್ವ್ ಬ್ಯಾಂಕ್‌ಗೆ ಪೇಮೆಂಟ್ ಆರ್ಡರ್ ಕಳುಹಿಸಿದ್ದೇವೆ ಎಂದ ಸಚಿವರು, ಒಟ್ಟು 25-30 ಲಕ್ಷ ಜನರಿಗೆ ಬರ ಪರಿಹಾರದ ಹಣ ಸಿಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಯಚೂರು: ಒಂದು ವಾರದಲ್ಲಿ ರಾಜ್ಯದ ರೈತರ ಖಾತೆಗೆ ಬರಪರಿಹಾರದ ಮೊದಲ ಕಂತಿನ ಹಣ ಜಮೆಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರುರಾಯಚೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಈ ಹಿಂದೆ ಬರಪರಿಹಾರ, ಅತಿವೃಷ್ಟಿ ಪರಿಹಾರ ನೀಡುವಲ್ಲಿ ಸಾಕಷ್ಟು ನ್ಯೂನ್ಯತೆಗಳಿದ್ದವು. ಎಷ್ಟೋ ಜನ ಬೆಳೆಯನ್ನೇ ಬೆಳೆಯದಿದ್ದರೂ ಅವರಿಗೆ ಪರಿಹಾರದ ಹಣ ಸಿಗುತ್ತಿತ್ತು. ನಿಜವಾಗಿ ಬೆಳೆ ಹಾನಿಯಾದವರಿಗೆ ಪರಿಹಾರ ಸಿಗುತ್ತಿರಲಿಲ್ಲ. ಹಿಂದಿನ ಸರಕಾರ ಇದ್ದಾಗ, ನಾನು ಕೃಷಿ ಸಚಿವನಿದ್ದಾಗಲೂ ಇದನ್ನು ನೋಡಿದ್ದೇನೆ. ಯಾರದೋ ಜಮೀನು, ಇನ್ಯಾರಿಗೋ ಹಣ ಪಾವತಿಯಾಗಿದೆ. ರೈತರ ಬೆಳೆಯೇ ಬೇರೆ, ಪರಿಹಾರ ಬರೋದೆ ಬೇರೆ. ಅಧಿಕಾರಿಗಳು ಬೆಳೆ ಮಾಹಿತಿ ಸೇರಿಸುವಾಗ ತಪ್ಪುಗಳಾಗುತ್ತಿದ್ದವು. ಇದೆಲ್ಲವನ್ನೂ ಸರಿಮಾಡಿ ಬೆಳೆ ಸಮೀಕ್ಷೆ ಆಧಾರದಲ್ಲಿ ಹಣ ಪಾವತಿಯಾಗಲಿದೆ ಎಂದು ಸಚಿವರು ವಿವರ ನೀಡಿದರು.
ಈ ವ್ಯವಸ್ಥೆ ಸರಿಪಡಿಸಲು ಎರಡು ತಿಂಗಳು ತಡವಾಗಿದೆ. ಮುಂದಿನ ಒಂದು ವಾರದಲ್ಲಿ ಮೊದಲ ಕಂತಿನ ಹಣ ಬರಲಿದೆ. 12 ಲಕ್ಷ ಜನರಿಗೆ ಹಣ ಪಾವತಿಸಲು ಆರ್‌ಬಿಐಗೆ ಪೇಮೆಂಟ್ ಆರ್ಡರ್ ಕಳುಹಿಸಿದ್ದೇವೆ. ಇನ್ನೂ 20 ಲಕ್ಷ ಜನರ ಪೇಮೆಂಟ್ ಆರ್ಡರ್ ಒಂದು ವಾರದಲ್ಲಿ ಕಳುಹಿಸಲಿದ್ದೇವೆ. ಒಟ್ಟು 25-30 ಲಕ್ಷ ಜನರಿಗೆ ಬರ ಪರಿಹಾರದ ಹಣ ಸಿಗಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಕೇಂದ್ರ ಸರಕಾರಕ್ಕೆ ಬರ ಪರಿಹಾರ ಕೋರಿ ಮನವಿ ಸಲ್ಲಿಸಲಾಗಿದ್ದು, ಇನ್ನೂ ಹಣ ಬಂದಿಲ್ಲ. ಹೀಗಾಗಿ ನಾವೇ ರೈತರಿಗೆ 2,000 ರೂ.ವರೆಗೆ ಪರಿಹಾರ ನೀಡಲು ನಿರ್ಧರಿಸಿದ್ದೇವೆ. ನಾವು ಕಳುಹಿಸಿರುವ ಮನವಿ ಪ್ರಕಾರ ಮೊದಲ ಕಂತಿನ ಹಣ 800-900 ಕೋಟಿ ರೂ. ಬರಬೇಕು. 4,663 ಕೋಟಿ ರೂ. ಪರಿಹಾರದ ಹಣವನ್ನು ಕೇಂದ್ರ ಸರಕಾರದಿಂದ ಕೇಳಿದ್ದೇವೆ. ಎಲ್ಲಾ ಸೇರಿ 18,172 ಕೋಟಿ ರೂ. ಪರಿಹಾರ ನೀಡುವಂತೆ ಕೇಂದ್ರವನ್ನು ಆಗ್ರಹಿಸಿದ್ದೇವೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಸರ್ಕಾರ ರೈತರಿಗೆ ನೀಡುವ ಬರ ಪರಿಹಾರ ಹಣ ದುರ್ಬಳಕೆಯಾಗುವುದನ್ನು ತಡೆಯುವ ಸಲುವಾಗಿ ಈ ವರ್ಷ ಪರಿಹಾರದ ಹಣವನ್ನು “ಫ್ರೂಟ್ಸ್” ತಂತ್ರಾಂಶದ ಮೂಲಕ ನೇರವಾಗಿ ರೈತರಿಗೆ ತಲುಪಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ರಾಯಚೂರಿನಲ್ಲಿ ಮಂಗಳವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, “ಸರ್ಕಾರ ಈ ಹಿಂದೆ ರೈತರ ಬರ ಪರಿಹಾರ ಹಣವನ್ನು ಅಧಿಕಾರಿಗಳ ಮೂಲಕ ತಲುಪಿಸುತ್ತಿತ್ತು. ಆದರೆ, ಈ ವೇಳೆ ಸಾಕಷ್ಟು ಹಣ ದುರ್ಬಳಕೆ ಪ್ರಕರಣಗಳೂ ಕಂಡು ಬರುತ್ತಿತ್ತು. ಪರಿಹಾರದ ಹಣವೂ ಸಿಗದೆ ರೈತರು ಪರಿತಪಿಸುವ ಸ್ಥಿತಿ ಇತ್ತು. ಹೀಗಾಗಿ ಈ ಎಲ್ಲಾ ಅಕ್ರಮಗಳಿಗೆ ತಡೆಯೊಡ್ಡುವ ಸಲುವಾಗಿ “ಫ್ರೂಟ್ಸ್” ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.
ಇದೀಗ ರಾಜ್ಯಾದ್ಯಂತ ಎಲ್ಲಾ ರೈತರ ಒಟ್ಟು ಜಮೀನಿನ ವಿಸ್ತೀರ್ಣ ಹಾಗೂ ಬೆಳೆ ಹಾನಿ ಕುರಿತ ಮಾಹಿತಿಯನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸಲಾಗಿದೆ. ಮೊದಲ ಕಂತಿನ ಪರಿಹಾರವನ್ನು ಯಾವುದೇ ತಾಂತ್ರಿಕ ದೋಷವಿಲ್ಲದೆ, ಹಣ ದುರುಪಯೋಗವಾಗದೆ ನೇರವಾಗಿ ರೈತರಿಗೆ ತಲುಪಿಸಲು ಎಲ್ಲಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಇನ್ನೂ ಒಂದು ವಾರದೊಳಗೆ ರಾಜ್ಯದ 25 ಲಕ್ಷ ರೈತರು ಪರಿಹಾರ ಹಣ ಪಡೆಯಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಅಲ್ಲದೆ, ರಾಯಚೂರು ಜಿಲ್ಲೆಯಲ್ಲಿ 1.4 ಲಕ್ಷ ರೈತರ ಆಧಾರ್ ಹಾಗೂ ಆರ್‌ಟಿಸಿ ಹೊಂದಾಣಿಕೆಯಾಗಿಲ್ಲ. ಮುಂದಿನ ಎರಡು ದಿನಗಳಲ್ಲಿ ತಹಶೀಲ್ದಾರ್ ಗಳು ಇದನ್ನು ಮತ್ತೊಮ್ಮೆ ಪರಿಶೀಲಿಸಬೇಕಿದೆ. ನಂತರ ರಾಯಚೂರಿನ ಎಲ್ಲಾ ರೈತರಿಗೆ ಪರಿಹಾರದ ಹಣವನ್ನು ಆನ್‌ಲೈನ್ ಮೂಲಕ ಬ್ಯಾಂಕ್ ಖಾತೆಗೆ ತಲುಪಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ರೈತರ ಆಧಾರ್ ಲಿಂಕ್ ನಮ್ಮ ಆದ್ಯತೆ:
ರೈತರ ಆರ್‌ಟಿಸಿ ಜೊತೆಗೆ ಆಧಾರ್ ಲಿಂಕ್ ಜೋಡಣೆ ನಮ್ಮ ಮುಂದಿನ ಆದ್ಯತೆಯಾಗಬೇಕು ಎಂದು ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಈ ಬಗ್ಗೆ ಗಮನ ಸೆಳೆದ ಅವರು, “ರಾಜ್ಯದಲ್ಲಿ ಸಣ್ಣ ರೈತರ ಸಂಖ್ಯೆ ಕನಿಷ್ಠ ಶೇ.77 ರಷ್ಟಿದೆ. ಆದರೆ, ಕೇಂದ್ರ ಸರ್ಕಾರದ ಅಂಕಿಅಂಶದ ಪ್ರಕಾರ ಈ ಸಂಖ್ಯೆ ಕೇವಲ ಶೇ.44 ರಷ್ಟು ಮಾತ್ರ. ಪರಿಣಾಮ ಕೇಂದ್ರದ ಮಾನದಂಡದ ಪ್ರಕಾರ ರಾಜ್ಯಕ್ಕೆ ಕನಿಷ್ಠ ಮೊತ್ತದ ಬರ ಪರಿಹಾರ ಲಭ್ಯವಾಗುತ್ತಿದೆ. ಹೀಗಾಗಿ ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ಮಾಹಿತಿ ನಮೂದಿಸುವಾಗ ಅವರ ಆರ್ಟಿಸಿ ಜೊತೆಗೆ ಆಧಾರ್ ಲಿಂಕ್ ಮಾಡಬೇಕು. ಆ ಮೂಲಕ ಪರಿಹಾರದ ಹಣ ತಲುಪಿಸುವ ಜೊತೆಗೆ ರಾಜ್ಯದ ರೈತರ ನಿಖರ ಅಂಕಿಅಂಶ ಪಡೆಯಬಹುದು ಎಂದು ಅವರು ವಿವರಿಸಿದರು.