ದೇಶದ ಪ್ಯಾರಾ ಮಿಲಟರಿ ಪಡೆಗಳಲ್ಲಿ ಸೇವೆ ಮಾಡಬೇಕೆಂಬ ಕನಸು ಹೊಂದಿರುವ ಯುವಕ-ಯುವತಿಯರಿಗೆ ಮತ್ತೊಂದು ಸುವರ್ಣಾವಕಾಶ ಬಂದಿದೆ. ಕೇಂದ್ರ ಗೃಹ ಸಚಿವಾಲಯದಡಿ ಕಾರ್ಯನಿರ್ವಹಿಸುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ (CAPF) ವಿವಿಧ ವಿಭಾಗಗಳಲ್ಲಿ ‘ಕಾನ್‌ಸ್ಟೆಬಲ್ ಜನರಲ್ ಡ್ಯೂಟಿ’ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಕೇಂದ್ರ ‘ಸಿಬ್ಬಂದಿ ನೇಮಕಾತಿ ಆಯೋಗ’ (SSC) ಆರಂಭಿಸಿದೆ.
ಪುರುಷ ಮತ್ತು ಮಹಿಳಾ ಕಾನ್‌ಸ್ಟೆಬಲ್ ಜನರಲ್ ಡ್ಯೂಟಿ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು ಇದೇ ಡಿಸೆಂಬರ್ 31 ಅರ್ಜಿ ಸಲ್ಲಿಸಲು ಕಡೆಯ ದಿನ. ಈ ನೇಮಕಾತಿ ಪ್ರಕ್ರಿಯೆಯ ವಿವರಗಳನ್ನು ಇಲ್ಲಿ
ಸಿಎಪಿಎಫ್ ಅಡಿ ಕಾರ್ಯನಿರ್ವಹಿಸುವ ಗಡಿ ಭದ್ರತಾ ಪಡೆ (BSF), ಕೇಂದ್ರೀಯ ಸಶಸ್ತ್ರ ಮೀಸಲು ಪೊಲೀಸ್ ಪಡೆ (CRPF), ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF), ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP), ಸಶಸ್ತ್ರ ಸೀಮಾ ಬಲ (SSB), ಹಾಗೂ ಸಿಎಪಿಎಫ್ ಹೊರತುಪಡಿಸಿ ಗೃಹ ಇಲಾಖೆಯ ಪ್ರತ್ಯೇಕ ಭದ್ರತಾ ಘಟಕಗಳಾದ ಅಸ್ಸಾಂ ರೈಫಲ್ಸ್ (AR) ಸೆಕ್ರೇಟರಿಯೆಟ್ ಸೆಕ್ಯೂರಿಟಿ ಫೋರ್ಸ್‌ನಲ್ಲಿ (SSF) ಕಾನ್‌ಸ್ಟೆಬಲ್ ಜನರಲ್ ಡ್ಯೂಟಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಹುದ್ದೆಗಳ ವಿವರ
ಕಾನ್‌ಸ್ಟೆಬಲ್ ಜಿಡಿ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳ ಒಟ್ಟು ಹುದ್ದೆಗಳ ಸಂಖ್ಯೆ 26,146. ಇದರಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿರುವ ಹುದ್ದೆಗಳ ಸಂಖ್ಯೆ 2,799. ಆನ್‌ಲೈನ್ ಅರ್ಜಿ ಸಲ್ಲಿಸಲು ಸಾಮಾನ್ಯ, ಒಬಿಸಿ ಅಭ್ಯರ್ಥಿಗಳಿಗೆ ₹100 ಶುಲ್ಕವಿದ್ದು, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ, ನಿವೃತ್ತ ಯೋಧರಿಗೆ ಶುಲ್ಕ ವಿನಾಯಿತಿ ಇದೆ. ಯುಪಿಐ ಸೌಲಭ್ಯ ಬಳಸಿಯೂ ಶುಲ್ಕವನ್ನು ಆನ್‌ಲೈನ್ ಪಾವತಿ ಮಾಡಬಹುದು.
ವಿದ್ಯಾರ್ಹತೆ
ಅಭ್ಯರ್ಥಿಗಳಿಗೆ ಕನಿಷ್ಠ ವಿದ್ಯಾರ್ಹತೆ ಎಸ್‌ಎಸ್ಎಲ್‌ಸಿ ಅಥವಾ ತತ್ಸಮಾನ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಕನಿಷ್ಠ 18 ರಿಂದ ಗರಿಷ್ಠ 23. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಗರಿಷ್ಠ 28, ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ 25 ವರ್ಷ ವಯೋಮಿತಿ ಸಡಿಲಿಕೆ ಇದೆ. ಸೇನೆಯ ನಿವೃತ್ತ ಯೋಧರು ನಿವೃತ್ತಿ ಆದಾಗಿನಿಂದ ಮೂರು ವರ್ಷದವೊಳಗೆ ಅರ್ಜಿ ಸಲ್ಲಿಸಬಹುದು.
ವೇತನ ಶ್ರೇಣಿ
21,700-69,100
ಪರೀಕ್ಷೆ ಹಾಗೂ ನೇಮಕಾತಿ ಪ್ರಕ್ರಿಯೆ
ಈ ನೇಮಕಾತಿಯು ನಾಲ್ಕು ಹಂತಗಳಲ್ಲಿ ನಡೆಯಲಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ದೈಹಿಕ ಸಾಮರ್ಥ್ಯ ಪರೀಕ್ಷೆ (PST/PET), ವೈದ್ಯಕೀಯ ಪರೀಕ್ಷೆ (DME/MRE) ಹಾಗೂ ದಾಖಲಾತಿಗಳ ತಪಾಸಣೆ ಪ್ರಕ್ರಿಯೆಗಳನ್ನು ಪೂರೈಸಬೇಕಾಗುತ್ತದೆ.
ಮೊದಲ ಹಂತವಾದ ಸಿಬಿಟಿ ಪರೀಕ್ಷೆಯಲ್ಲಿ 160 ಅಂಕಗಳಿಗೆ 80 ಪ್ರಶ್ನೆಗಳ 1 ಪತ್ರಿಕೆ ಮಾತ್ರ ಇರುತ್ತದೆ. ಪ್ರತಿ ಪ್ರಶ್ನೆಗೆ 2 ಅಂಕ. ಅವಧಿ 1 ಗಂಟೆ ಮಾತ್ರ. ಪ್ರತಿ 4 ತಪ್ಪು ಉತ್ತರಗಳಿಗೆ 1 ಅಂಕ ಕಳೆಯಲಾಗುತ್ತದೆ. ಬಹುಆಯ್ಕೆ ಮಾದರಿಯ ಪ್ರಶ್ನೆಗಳಿರುತ್ತವೆ.
ಸಿಬಿಟಿ ಪರೀಕ್ಷೆ ಇಂಗ್ಲಿಷ್, ಹಿಂದಿ ಹಾಗೂ ಕನ್ನಡವೂ ಒಳಗೊಂಡಂತೆ ಇತರ 12 ಪ್ರಾದೇಶಿಕ ಭಾಷೆಗಳಲ್ಲಿ ನಡೆಯಲಿದೆ. ಮುಂದಿನ ಹಂತಕ್ಕೆ ಹೋಗಬೇಕಾದರೆ ಅಭ್ಯರ್ಥಿಗಳು ಕನಿಷ್ಠ ಶೇ 30ರಷ್ಟು ಅಂಕಗಳನ್ನು ಇದರಲ್ಲಿ ಪಡೆಯುವುದು ಕಡ್ಡಾಯ.
ದೈಹಿಕ ಸಾಮರ್ಥ್ಯ ಪರೀಕ್ಷೆ, ದೈಹಿಕ ಸಹಿಷ್ಣುತಾ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಗಳ ಅರ್ಹತಾ ಮಾನದಂಡಗಳಿಗಾಗಿ, ಹುದ್ದೆಗಳ ಪ್ರವರ್ಗವಾರು ವಿಂಗಡಣೆ ಹಾಗೂ ಇತರೆ ಹೆಚ್ಚಿನ ಮಾಹಿತಿ ಬಗ್ಗೆ ಆಸಕ್ತ ಅಭ್ಯರ್ಥಿಗಳು ಎಸ್‌ಎಸ್‌ಸಿಯ ಅಧಿಕೃತ ವೆಬ್‌ಸೈಟ್ ssc.nic.in ನೋಡಬಹುದು.